   ಮೂಲದೊಡನೆ ಹೋಲಿಸಿ

ಒಲ್ಲಾರಿ: ಮಧ್ಯದ್ರಾವಿಡ ಗುಂಪಿನ ಐದು ಉಪಭಾಷೆಗಳಲ್ಲೊಂದು. ಪರ್ಜಿ, ಗ ದ ಬ, ಕೋಲಾಮೀ, ನಾಯಕಿ ಇವು ಉಳಿದ ನಾಲ್ಕು, ಇವೆಲ್ಲ ಒಂದು ಪ್ರಧಾನ ಶಾಖೆಗೆ ಸೇರಿವೆ, ಒಲ್ಲಾರಿ ಮಾತನಾಡುವವರ ಸಂಖ್ಯೆ 2002ನೆಯ ಜನಗಣತಿಯಂತೆ 15,000 ಮಾತ್ರ. ಇದು ಒರಿಸ್ಸದ ಕೋರಾಪುಟ್ ಜಿಲ್ಲೆಯ ಸುತ್ತಮುತ್ತ ಬಳಕೆಯಲ್ಲಿದೆ. 1951ರಲ್ಲಿ ಸುಧೀಭೂಷಣ ಭಟ್ಟಾಚಾರ್ಯ ಆ ಜಿಲ್ಲೆಯನ್ನು ಸಂದರ್ಶಿಸಿ ಈ ಉಪಭಾಷೆಯ ಪರಿಶೀಲನೆ ನಡೆಸಿದರು. ಭಾರತ ದೇಶದ ಪ್ರಕಟನ ವಿಭಾಗದಿಂದ ಪ್ರಚುರವಾದ (1956-57) ಇವರ ಗ್ರಂಥ ‘ಒಲ್ಲಾರಿ, ಎ ಡ್ರವಿಡಿಯನ್ ಸ್ಪೀಚ್’ ಎಂಬುದು ಈ ಭಾಷೆಯ ಬಗ್ಗೆ ಸಾಕಷ್ಟು ವಿವರಗಳನ್ನು ಕೊಡುತ್ತದೆ. ಒಲ್ಲಾರಿಯ ವ್ಯಾಕರಣ ಮತ್ತು ಶಬ್ದಭಂಡಾರ ದ್ರಾವಿಡ ಭಾಷೆಗಳ ಕಡೆ ವಾಲುವುದನ್ನು ಸ್ಪಷ್ಟವಾಗಿ ಕಾಣಬಹುದು. ಅಂಬ್(ಬಾಣ), ಕಿಸ್(ಕಿಚ್ಚು), ಪಾಲ್ (ಹಾಲು), ಮರ್ದಿಲ್(ಮದ್ದು), ಸುಪ್(ಉಪ್ಪು), ಕಣ್(ಕಣ್ಣು), ಕಿ(ಕೈ), ತಲ್(ತಲೆ), ಪಲ್(ಹಲ್ಲು)-ಇವು ದಿನಬಳಕೆಯ ಕೆಲವು ಶಬ್ದಗಳೂ, ಆನ್(ನಾನು), ಆಮ್(ನಾವು), ಈನ್(ನೀನು), ಈಮ್(ನೀವು), ಓಣ್ಡಿ (ಅವನು), ಒರ್(ಅವರು-ಪುರುಷರು ಮಾತ್ರ), ಅದ್(ಅವಳು)-ಇವು ಸರ್ವನಾಮಗಳು. ಇಂಡಿ(ಎರಡು), ಇರಲ್(ಇಬ್ಬರು-ಸ್ತ್ರೀಯರು), ಇರುಲ್(ಇಬ್ಬರು-ಪುರುಷರು), ಮೂಣ್ಡ್‌(ಮೂರು)- ಇವು ಸಂಖ್ಯಾವಾಚಿಗಳು. ಅಟ್(ಹೊಡಿ), ಅಡ್(ಅಳು), ಇಡ್ಗೆ(ಇಳಿ), ಉನ್(ಕುಡಿ), ಕಟ್(ಕಟ್ಟು), ಕೂಯ್(ಕರೆ, ಕೂಗು), ಮನ್ (ಇರು), ನಿಲ್(ನಿಲ್ಲು), ವರ್(ಬರು), ಸೀ(ಕೂಡು)- ಇವು ಕೆಲವು ಧಾತುಗಳು.
 
ಈ ಭಾಷೆಯ ವರ್ಣಗಳು ಹೀಗಿವೆ:

ಸ್ವರಗಳು    : ಅ ಆ ಇ ಈ ಉ ಊ ಎ ಏ ಒ ಓ

ವ್ಯಂಜನಗಳು : ಕ್ ಗ್ ಙ್ ಚ್ ಜ್ ಞ್ ಟ್ ಡ್ ಣ್ ಪ್ ಬ್ ಮ್ ಯ್ ರ್ Œಡ್             
          ಲ್ ವ್ Œಚ್ Œಜ್ Œಸ್

ಈ ಭಾಷೆಯಲ್ಲಿ ಭೂತಕಾಲಿಕ ಪ್ರಯತ್ನಗಳು ಎ, ಒ, ಸೂಡ್ ಎನ್(ನಾನು ನೋಡಿದೆ), ಸೂಡ್ ಎಮ್ (ನಾವು ನೋಡಿದೆವು), ಈಲ್ ಎನ್ (ಬಿದ್ದೆ), ಈಲ್ ಎಮ್ (ಬಿದ್ದೆವು), ಸೀನ್ ಒನ್ (ಕೊಟ್ಟೆ), ಸೀನ್ ಒಮ್ (ಕೊಟ್ಟೆವು), ಸಕರ್ಮಕ ಮತ್ತು ಪ್ರೇರಣಾರ್ಥಕ ಕ್ರಿಯಾಪದಗಳಲ್ಲಿ ಧಾತುವಿಗೆ ಭೂತಕಾಲದಲ್ಲಿ ತ್ ಪ್ರತ್ಯಯ ಸೇರುತ್ತದೆ. ಕಾತ್ ಒನ್ (ಕಾದಿದೆ), ಕಾತ್ ಒಮ್ (ಕಾದಿದೆವು), ವರ್ತಮಾನ ಮತ್ತು ಭವಿಷ್ಯತ್ತಿನಲ್ಲಿ ಧಾತುಗಳಿಗೆ ದ್ ಪ್ರತ್ಯಯ ಸೇರುತ್ತದೆ, ಸೀದ್ ಅನ್ (ಕೊಡುತ್ತೇನೆ) ಸೀದ್ ಅಮ್ (ಕೊಡುತ್ತೇವೆ). 				           (ಬಿ.ಎಚ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ